ಕಾಂತ ರಸಾಯನಶಾಸ್ತ್ರ

ಪರಮಾಣ್ವಿಕ ಮತ್ತು ಆಣ್ವಿಕ ರಚನೆಗಳಿಗೂ ಒಂದು ಕಾಂತಕ್ಷೇತ್ರಕ್ಕೂ ಇರುವ ಅಂತರಸಂಬಂಧವನ್ನು ಅಭ್ಯಸಿಸುವ ರಸಾಯನಶಾಸ್ತ್ರ ವಿಭಾಗ (ಮ್ಯಾಗ್ನೆಟೊಕೆಮಿಸ್ಟ್ರಿ). ಕಾಂತದಿಂದ ಆಕರ್ಷಕವಾಗುವ ವಸ್ತುಗಳಲ್ಲಿ ಕಬ್ಬಿಣ ಪ್ರಧಾನವಾದದ್ದು ನಿಜ. ಈ ಗುಣಕ್ಕೆ ಕಾಂತಪ್ರವೃತ್ತಿ (ಮ್ಯಾಗ್ನೆಟಿಕ್ ಸಸೆಷ್ಟಿಬಿಲಿಟಿ) ಎಂದು ಹೆಸರು. ಕಾಂತಪ್ರವೃತ್ತಿ ಇರುವ ಇತರ ವಸ್ತುಗಳೂ ಇವೆ-ಕೆಲವು ಇತರ ಲೋಹಗಳು, ಆಕ್ಸಿಜನ್ ಮುಂತಾದ ಅನಿಲಗಳು, ಮುಕ್ತರ್ಯಾಡಿಕಲ್‍ಗಳು ಎಂದು ಹೆಸರಿರುವ ಅಷ್ಟೊಂದು ಸ್ಥಿರತೆ ಇರದ ಬಿಡಿಮೂಲ ಘಟಕಗಳು, ಇತ್ಯಾದಿ. 1845ರಲ್ಲಿ ಫ್ಯಾರಡೆ ತನ್ನ ಒಂದು ಪ್ರಯೋಗದಲ್ಲಿ ಎಲ್ಲ ವಸ್ತುಗಳನ್ನೂ ಕಾಂತಪ್ರವೃತ್ತಿಯ ದೃಷ್ಟಿಕೋನದಿಂದ ಪರೀಕ್ಷಿಸಿದ. ಒಂದು ವಸ್ತುವನ್ನು ಅಧಿಕ ಕಾಂತಸಾಮಥ್ರ್ಯ (ಮ್ಯಾಗ್ನೆಟಿಕ್ ಸ್ಟ್ರೆಂತ್) ಇರುವ ಕ್ಷೇತ್ರದಲ್ಲಿಟ್ಟಾಗ ಅದು ಕಾಂತಕ್ಷೇತದ ಕಡೆಗೆ ಆಕರ್ಷಿತವಾದರೆ ಅದನ್ನು ಅನುಕಾಂತೀಯವೆಂದೂ (ಪ್ಯಾರಾಮ್ನಾಗ್ನೇಟಿಕ್) ವಿಕರ್ಷಿತವಾದರೆ ಅದನ್ನು ಪ್ರತಿಕಾಂತೀಯವೆಂದೂ (ಡಯಾಮ್ಯಾಗ್ನೆಟಿಕ್) ಎಂದೂ ಹೆಸರಿಸಿದೆ. ಕಾಂತಕ್ಷೇತ್ರದಿಂದ ವಸ್ತು ಎಷ್ಟು ಪ್ರಭಾವಿತವಾಗುತ್ತದೆ ಎಂಬುದರ ಮಾನಕವೇ ಆ ವಸ್ತುವಿನ ಕಾಂತ ಪ್ರವೃತ್ತಿ. ವಸ್ತುವಿನಲ್ಲಿ ಮೂಡುವ ಕಾಂತಪ್ರವೃತ್ತಿ ಅನುಕಾಂತೀಯಗಳಲ್ಲಿ ಹೆಚ್ಚು. ಉಷ್ಣತೆಯಲ್ಲಿನ ಬದಲಾವಣೆ ಪ್ರತಿಕಾಂತೀಯಗಳ ಈ ಗುಣವನ್ನು ವ್ಯತ್ಯಾಸ ಮಾಡಲಾರದು ಎಂಬುದನ್ನು ಪಿ. ಕ್ಯೂರಿ ಕಂಡುಹಿಡಿದಿದ್ದಾನೆ. ಕಾಂತದಿಂದ ಕಬ್ಬಿಣ ಬಲು ಹೆಚ್ಚಾಗಿ ಆಕರ್ಷಿಕವಾಗುವುದರಿಂದಲೂ ಅದಕ್ಕೆ ಇತರ ವಿಶೇಷ ಗುಣಗಳಿರುವುದರಿಂದಲೂ ಅದನ್ನು ಫೆರ್ರೋಕಾಂತೀಯವೆಂದೂ (ಫೆರ್ರೋಮ್ಯಾಗ್ಯೆಟಿಕ್) ಕರೆಯುತ್ತಾರೆ. ಕಾಂತಕ್ಷೇತ್ರ ಸಾಮಥ್ರ್ಯದಿಂದ ಈ ರೀತಿ ಪ್ರಭಾವಿತವಾಗುವ ವಸ್ತುಗಳು ಪರಮಾಣುಗಳು ಅಣುಗಳು; ಹರಳುಗಳು, ರಸಾಯನವಸ್ತುಗಳು, ಕಡೆಗೆ ಬಿಡಿಮೂಲಘಟಕಗಳೂ ಆಗಿರಬಹುದು, ಲೋಹಗಳಲ್ಲಿ ಪೆಲೇಡಿಯಂ, ಪ್ಲಾಟಿನಂ ಮುಂತಾದುವುಗಳಿಗೆ ಅದರಲ್ಲೂ ವಿರಳ ಖನಿಜ (ರೇರ್ ಅರ್ತ್) ಗುಂಪಿಗೆ ಸೇರಿದ ಲೋಹಗಳಿಗೆ ಅನುಕಾಂತೀಯ ಗುಣಗಳಿವೆ. ಸಾಧಾರಣವಾಗಿ ಉತ್ತಮ ವಿದ್ಯುದ್ವಾಹಕಗಳಿಗೆ ಈ ಗುಣ ಕಡಿಮೆ.

ಸಾಧಾರಣವಾಗಿ ರಸಾಯನವಸ್ತುಗಳು ಪ್ರತಿಕಾಂತೀಯವಾಗಿರುವುವು. ಆದರೆ ಆ ಗುಣ ಪ್ರಕಟಿತವಾಗಿಯೇ ಇರಬೇಕೆಂದಿಲ್ಲ. ಈ ಗುಣಕ್ಕೂ ರಸಾಯನವಸ್ತುಗಳಿಗೂ ಇರುವ ಸಂಬಂಧ ಪರಮಾಣುಗಳಲ್ಲಿನ ಋಣವಿದ್ಯುತ್ತಿನಲ್ಲಿ ಎಲೆಕ್ಟ್ರಾನುಗಳಿಂದ. ಎಲೆಕ್ಟ್ರಾನುಗಳು ತಮ್ಮ ತಮ್ಮ ಅಕ್ಷಗಳ ಸುತ್ತಲೂ ಆವರ್ತಿಸುತ್ತಿರುತ್ತವೆ. ಈ ಆವರ್ತನೆಯಿಂದ ಅವು ಸಹ ಕಾಂತಸಾಮಥ್ರ್ಯ ಪಡೆದಿರುತ್ತವೆ. ಸಾಧಾರಣವಾಗಿ ಧಾತುಗಳಲ್ಲಿ ಎಲೆಕ್ಟ್ರಾನುಗಳು ಜೊತೆಯಾಗಿ ಇದ್ದು ವಿರುದ್ಧ ದಿಕ್ಕಿನಲ್ಲಿ ತಿರುಗುವುದರಿಂದ ಒಂದರ ಪರಿಣಾಮವನ್ನು ಇನ್ನೊಂದು ಹೊಡೆದು ಹಾಕುತ್ತದೆ. ಹೀಗಾಗಿ ಇವುಗಳ ನಿವ್ವಳ ಕಾಣಿಕೆ ಸೊನ್ನೆ (ಆಗ ಕಕ್ಷಕ ಚಲನೆಯಲ್ಲಿ ಪ್ರತಿಕಾಂತೀಯತೆ ಕಾಣಿಸಿಕೊಳ್ಳುತ್ತದೆ.) ಆದರೆ ಜೊತೆಗೂಡದ ಒಂಟಿ ಎಲೆಕ್ಟ್ರಾನುಗಳು ಒಂದು ಧಾತುವಿನಲ್ಲಿ ಇದ್ದಾಗ ಧಾತುವಿಗೆ ಸಹಜವಾಗಿ ಅನುಕಾಂತೀಯ ಗುಣ ಇರುವುದು. ಒಂಟಿ ಎಲೆಕ್ಟ್ರಾನುಗಳು ಪರಮಾಣುಗಳಲ್ಲಿ ಹೆಚ್ಚಾಗಿ ಇದ್ದರೆ ಅಂಥ ಧಾತುಗಳು ಅಧಿಕ ಅನುಕಾಂತಪ್ರವೃತ್ತಿ ಉಳ್ಳವಾಗಿರುತ್ತವೆ. ಒಂಟಿ ಎಲೆಕ್ಟ್ರಾನಿಗೂ ಒಂಟಿ ಎಲೆಕ್ಟ್ರಾನುಗಳಿಂದ ಕೂಡಿರುವ ರಸಾಯನ ವಸ್ತುಗಳಿಗೂ ಕಾಂತಭ್ರಮಣಾಂಕ (ಮ್ಯಾಗ್ಯೆಟಿಕ್ ಮೊಮೆಂಟ್) ಇರುವಂತೆಯೇ ಧನವಿದ್ಯುತ್ತಿರುವ ಪ್ರೋಟಾನಿಗೂ ಕಾಂತಭ್ರಮಣಾಂಕವಿದೆ. ಆದರೆ ಇದು ಎಲೆಕ್ಟ್ರಾನಿನ ಎರಡು ಸಾವಿರದಲ್ಲೊಂದು ಭಾಗ ಮಾತ್ರ.

ಕಬ್ಬಿಣದ ಪರಮಾಣುವಿನಲ್ಲಿ ಒಂಟಿ (ವೇಲೆನ್ಸ್) ಎಲೆಕ್ಟ್ರಾನುಗಳು ಇವೆ. ಆದ್ದರಿಂದ ಸಹಜವಾಗಿಯೇ ಕಾಂತಕ್ಷೇತ್ರದ ಪ್ರಭಾವ ಆ ಪರಮಾಣುವಿನ ಮೇಲೆ ಹೆಚ್ಚು. ಕಬ್ಬಿಣದ ಪರಮಾಣುವನ್ನು ಫೆರ್ರೊಕಾಂತೀಯ (ಫೆರ್ರೊಮ್ಯಾಗ್ನೆಟಿಕ್) ಗುಂಪಿಗೆ ಸೇರಿಸಿದ್ದಾರೆ. ಅದಕ್ಕೆ ಕಾಂತವಾಗುವ ಶಕ್ತಿ ಇದೆ. ಇದರ ಲೋಹದ ಪರಮಾಣುಗಳ ಕಾಂತ ಭ್ರಮಣಾಂಕದ ಪರಿಣಾಮ ಸ್ಥಿರ. ಅಲ್ಲದೆ ಒಂದು ಕ್ರಮದಲ್ಲಿ ಇದರ ಪರಮಾಣುಗಳು ವ್ಯವಸ್ಥಿತವಾಗಬಲ್ಲುವಾದ್ದರಿಂದ ಕಬ್ಬಿಣ ಕಾಂತವಾಗಬಲ್ಲುದು. ಆದರೆ ಮ್ಯಾಂಗನೀಸ್ ಲೋಹ ಇದಕ್ಕೆ ವಿರುದ್ಧ. ಅದರ ಪರಮಾಣುಗಳಿಗೆ ಈ ಗುಣವಿಲ್ಲ. ಆದ್ದರಿಂದ ಮ್ಯಾಂಗನೀಸನ್ನು ಪ್ರತಿಫೆರ್ರೊಕಾಂತೀಯ ಗುಂಪಿಗೆ (ಅಂಟಿಫೆರ್ರೋಮ್ಯಾಗ್ನೆಟಕ್) ಸೇರಿಸಿದ್ದಾರೆ. ವಸ್ತುಗಳಲ್ಲಿ ಈ ರೀತಿಯ ವೈವಿಧ್ಯ ಏಕೆ ಎಂಬುದನ್ನು ಖಚಿತವಾಗಿ ಹೇಳುವುದು ಬಲು ಕಷ್ಟ. ಕಬ್ಬಿಣ, ಕೋಬಾಲ್ಟ್, ನಿಕಲ್ ಲೋಹಗಳು, ಯುರೇನಿಯಂ ಹೈಡ್ರ್ಯಡ್ ಮತ್ತು ನಿಕಲ್ ಸಲ್ಪೈಡುಗಳು ಫರ್ರೊಕಾಂತೀಯಗಳು; ಮ್ಯಾಂಗನೀಸ್, ಟೈಟಾನಿಯಂ, ಯುರೇನಿಯಂಗಳ ಕ್ಲೋರೈಡುಗಳು ಮತ್ತು ನೆಪ್ಚೂನಿಯಂ ಡೈಆಕ್ಸೈಡ್ ಪ್ರತಿಫೆರ್ರೊಕಾಂತೀಯಗಳು.

ಆಕ್ಸಿಜನ್ನಿನ ಪರಮಾಣುವಿನಲ್ಲಿ ಎರಡು ಒಂಟಿ ಎಲೆಕ್ಟ್ರಾನುಗಳು ಇವೆ. ಆದ್ದರಿಂದ ಇದಕ್ಕೆ ಅನುಕಾಂತೀಯ ಗುಣವಿದೆ. ಈ ಗುಣವಿರುವ ಉಳಿದ ಅನಿಲಗಳು ನೈಟ್ರಸ್ ಆಕ್ಸೈಡ್, ಕ್ಲೋರೀನಿನ ಡೈ ಮತ್ತು ಟ್ರೈಆಕ್ಸೈಡುಗಳು. ಇದೇ ರೀತಿ ಬಿಡಿ ಮೂಲ ಫಟಕಗಳಲ್ಲಿಯೂ ಎರಡು ಒಂಟಿ ಎಲೆಕ್ಟ್ರಾನುಗಳಿರುವುದರಿಂದ ಅವೂ ಅನುಕಾಂತೀಯಗಳೇ. ಉದಾಹರಣೆಗೆ ಟ್ರೈ ಫೀನೈಲ್ ಮೀಥೈಲ್. ಇದು ಹೆಕ್ಸಫಿನಲೀನ್ ಈಥೇನನ್ನು ಬೆಂಜಿûೀನಿನಲ್ಲಿ ವಿಲೀನವಾಗುವುದರಿಂದ ಬರುತ್ತದೆ. ಇನ್ನೊಂದು ಡೈಫಿನೈಲ್-ಪಿಕ್ರೈಲ್ ಹೈಡ್ರಜೈಲ್, ಇದು ಘನರೂಪದಲ್ಲಿಯೂ ಸ್ಥಿರವಾಗಿರುತ್ತದೆ.

ಅನುಕಾಂತೀಯ ಮತ್ತು ಪ್ರತಿಕಾಂತೀಯ ವಸ್ತುಗಳನ್ನು ಪರೀಕ್ಷೆ ಮಾಡಲು ಹೆಚ್ಚಾಗಿ ಇವುಗಳ ಕಾಂತಪ್ರವೃತ್ತಿಯನ್ನು ಕಂಡುಹಿಡಿಯುತ್ತಾರೆ. ಕಾಂತಪ್ರವೃತ್ತಿ ಅನುಕಾಂತೀಯಗಳಲ್ಲಿ ಉಷ್ಣತೆಯನ್ನು ಅವಲಂಬಿಸಿದೆ. ಫೆರ್ರೊಕಾಂತೀಯಗಳೂ ಪ್ರತಿ ಫೆರ್ರೊಕಾಂತೀಯಗಳೂ ಉಷ್ಣತೆಯನ್ನಲ್ಲದೆ ಕಾಂತಕ್ಷೇತ್ರ ಸಾಮಥ್ರ್ಯವನ್ನೂ ಅವಲಂಬಿಸಿರುತ್ತವೆ. ಈ ಅವಲಂಬನೆ ಒಂದು ಉಷ್ಣತೆಯ ಮಟ್ಟದ (ಕ್ಯೂರಿ ಬಿಂದು ಎಂಬ ಉಷ್ಣತೆ ಫೆರ್ರೊಕಾಂತೀಯಗಳಲ್ಲಿ, ನೀಲ್ ಬಿಂದು ಎಂಬ ಉಷ್ಣತೆ ಪ್ರತಿ ಫೆರ್ರೋಕಾಂತೀಯಗಳಲ್ಲಿ) ವರೆಗೆ ಮಾತ್ರ. ಅದರ ಮೇಲಿನ ಉಷ್ಣತೆಯಲ್ಲಿ ಕಾಂತಪ್ರವೃತ್ತಿಯ ಮೇಲೆ ಪ್ರಭಾವವಿಲ್ಲ.

ಇತ್ತೀಚಿನ ಸಂಶೋಧನೆಗಳಿಂದ ಕಾಂತಾನುನಾದವನ್ನು (ಮ್ಯಾಗ್ನೆಟಿಕ್ ರೆಸೊóನೆನ್ಸ್) ಕಂಡುಹಿಡಿಯಲು ಸಾಧ್ಯವಾಗಿದೆ. ಎಲೆಕ್ಟ್ರಾನಿನ ಕಾಂತಾನುನಾದದಿಂದ ಅಥವಾ ನ್ಯೂಕ್ಲಿಯದ ಕಾಂತಾನುನಾದಗಳಿಂದ ಕಾಂತಭ್ರಮಣಾಂಕವನ್ನು ನಿರ್ಧರಿಸುತ್ತಾರೆ. ಪರಮಾಣವಿನಲ್ಲಿ ಎಲೆಕ್ಟ್ರಾನುಗಳು ಸಾಧಾರಣವಾಗಿ ಎರಡು ಸ್ಥಿತಿಗಳಲ್ಲಿ ಇರುತ್ತವೆ. ಶಕ್ತಿಯ ಕೆಳಮಟ್ಟದಲ್ಲಿರುವ ಸ್ಥಿತಿಯೇ ಹೆಚ್ಚು. ಇವನ್ನು ಕಾಂತಕ್ಷೇತ್ರಕ್ಕೆ ಒಳಪಟ್ಟಿಸಿದಾಗ ಎಲೆಕ್ಟ್ರಾನುಗಳು ಶಕ್ತಿ ಹೀರಿ ಇನ್ನೊಂದು ಸ್ಥಿತಿಗೆ ಹಾರುತ್ತವೆ. ಆಗ ಬರುವ ಕಾಂತಾನುನಾದರೋಹಿತದ (ಮ್ಯಾಗ್ನೆಟಿಕ್ ರೆಸೊóನೆನ್ಸ್ ಸ್ಪೆಕ್ಟ್ರಂ) ಅಧ್ಯಯನ ಕಾಂತ ರಸಾಯನಶಾಸ್ತ್ರದ ಉಪಯೋಗ ವಿಪುಲವಾಗಿ ಹರಡುವಂತೆ ಮಾಡಿದೆ. ಈ ಮಾರ್ಗದ ಮೂಲಕ ಬಿಡಿ ಪರಮಾಣು ಘಟಕಗಳು 10,000,000 ಭಾಗದಲ್ಲಿ ಒಂದರಷ್ಟು ಇದ್ದರೂ ಅವು ಎಷ್ಟು ಇವೆ ಎಂಬುದನ್ನು ನಿಖರವಾಗಿ ಕಂಡುಹಿಡಿಯಲು ಸಾಧ್ಯವಾಗಿದೆ. ಹೀಗೆ ಇಷ್ಟೊಂದು ಸೂಕ್ಷ್ಮ ಮಾರ್ಗ ಇರುವುದರಿಂದ ಈ ಬಿಡಿ ಪರಮಾಣು ಘಟಕಗಳು ಇವೆಯೇ. ಇದ್ದರೆ ಎಷ್ಟು ಇವೆ? ಯಾವ ಪ್ರಮಾಣದಲ್ಲಿ ಇವೆ? ಎಂಬುದನ್ನು ಕಂಡುಹಿಡಿಯುವುದು ಸಾಧ್ಯವಾಗಿದೆ. ಅಲ್ಲದೆ ಅವುಗಳಲ್ಲಿನ ಎಲೆಕ್ಟ್ರಾನುಗಳ ರಚನೆಯ ವಿಷಯ, ಅವುಗಳ ಸ್ಥಿರತೆಗೆ ಕಾರಣಗಳೇನು ಎಂಬ ಪ್ರಶ್ನೆಗಳಿಗೂ ಉತ್ತರ ದೊರಕಿಸುವ ಸಂಶೋಧನೆಗಳಿವೆ ಇದು ಸಹಾಯವಾಗಿದೆ. ರಸಾಯನಶಾಸ್ತ್ರದ ಸಮಸ್ಯೆಗಳನ್ನು ಬಿಡಿಸಲು ಕಾಂತಮಾರ್ಗವನ್ನೇ ಹೆಚ್ಚುಹೆಚ್ಚಾಗಿ ಬಳಸುತ್ತಿದ್ದಾರೆ. ವಸ್ತುಗಳ ಇರವನ್ನು ಕಂಡುಹಿಡಿಯಲು, ಬಿಡಿ ಪರಮಾಣು ಘಟಕಗಳನ್ನು ಶೋಧಿಸಲು, ಇನಾರ್ಗೇನಿಕ್ ವಸ್ತುಗಳ ಅಣು ರಚನೆಯನ್ನು ಕಂಡುಹಿಡಿಯಲು ಮತ್ತು ವೇಗೋತ್ಕರ್ಷಕಗಳ ಕಾರ್ಯ ವಿನ್ಯಾಸದ ಸಂಶೋಧನೆಯಲ್ಲೂ ಇದೇ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಅನುಕಾಂತೀಯ ವಸ್ತುಗಳು ಕೇವಲ ಅತಿ ಕಡಿಮೆ ಪ್ರಮಾಣದಲ್ಲಿ ಬೆರಕೆಯಾಗಿದ್ದರೂ ಕಾಂತಮಾರ್ಗದಿಂದ ಅವನ್ನು ಕಂಡುಹಿಡಿಯಬಹುದು. ಉದಾಹರಣೆಗೆ, ಗಾಜನ್ನು ತಯಾರಿಸಲು ಬಳಸುವ ಮರಳಿನಲ್ಲಿ ಸ್ವಲ್ಪವೂ ಕಬ್ಬಿಣ ಇರಕೂಡದು: ಹಾಗೆಯೇ ಮೆಗ್ನಿಸಿಯಂನಲ್ಲಿ ಕಬ್ಬಿಣ ಇರಕೂಡದು. ಇಂಥ ಸಂದರ್ಭಗಳಲ್ಲಿ ಪರಿಶುದ್ಧತೆಯನ್ನು ಕಂಡುಹಿಡಿಯಲು ಕಾಂತಮಾರ್ಗ ಬಲು ಪ್ರಯೋಜನಕಾರಿ. ಕಾಂತಪರಿಶುದ್ಧತೆ (ಮ್ಯಾಗ್ನೆಟಿಕಲಿ ಪ್ಯೂರ್) ಎಂಬುದೇ ಪರಿಶುದ್ಧತೆಯಲ್ಲಿ ಒಂದು ಉಚ್ಚರೀತಿಯ ಮಟ್ಟ. ಅನಿಲಗಳ ಮಿಶ್ರಣದಲ್ಲಿ ಆಕ್ಸಿಜನ್ ಎಷ್ಟು ಇದೆ ಎಂಬುದನ್ನು ನಿರ್ಧರಿಸುವುದು ಕಾಂತ ರಸಾಯನಶಾಸ್ತ್ರದ ಉಪಯೋಗಕ್ಕೆ ಇನ್ನೊಂದು ಉದಾಹರಣೆ. ಹಾಗೆಯೇ ರಸಾಯನ ಮತ್ತು ಲೋಹಶಾಸ್ತ್ರಗಳಲ್ಲಿನ ಅನೇಕ ರೀತಿಯ ರಸಾಯನಕಾರ್ಯಗಳ ಸಂಶೋಧನೆಗೆ ಅದರಲ್ಲೂ ಅತಿ ಚಿಕ್ಕ ಕಣಗಳ ತ್ರಿಜ್ಯ ಮತ್ತು ಆಕಾರ ಕಂಡುಹಿಡಿಯಲೂ ಈ ಮಾರ್ಗ ಅನುಕೂಲ. ಇದನ್ನು ಉಷ್ಣಕಾಂತ ವಿಶ್ಲೇಷಣ (ಥರ್ಮೋ ಮ್ಯಾಗ್ನೆಟಿಕ್ ಅನಾಲಿಸಿಸ್) ಮಾರ್ಗವೆಂದು ಕರೆಯುತ್ತಾರೆ. ರಕ್ತದಲ್ಲಿ ಆಕ್ಸಿಜನ್ನನ್ನು ಸಾಗಿಸುವ ಹೀಮೋಗ್ಲಾಬಿನ್ ಅಣುವಿನಲ್ಲಿ ಕಬ್ಬಿಣ ಇದೆ. ಆದ್ದರಿಂದ ಅದು ಅನುಕಾಂತೀಯ. ಅದು ಶ್ವಾಸ ಕೋಶದ ಲೋಮರಕ್ತನಾಳಗಳ ಮೂಲಕ ಹರಿಯುವಾಗ ಆಕ್ಸಿಜನ್ನನ್ನು ಹೀರಿಕೊಂಡು ಪ್ರತಿಕಾಂತೀಯ ಆಗುತ್ತದೆ.

ಕಾಂತರಸಾಯನಶಾಸ್ತ್ರದ ನೆರೆವಿನಿಂದ ಎಲೆಕ್ಟ್ರಾನಿಕ್ ಸಲಕರಣೆಗಳ ತಯಾರಿಕೆಗೆ ಬೇಕಾದ ಫ್ರಿರ್ರೈಟುಗಳ ವಿಷಯ ತಿಳಿಯಬಹುದು. ಕಾಂತಮಾರ್ಗ ಬಳಕೆಯಲ್ಲಿರುವ ಇನ್ನೊಂದು ಕ್ಷೇತ್ರ ಉತ್ಕರ್ಷಣಕ್ರಿಯೆಯ ಸಂಶೋಧನೆಯಲ್ಲಿ. ನಿಕಲ್ ಕ್ರೋಮಿಯಂ ಮತ್ತು ಅವುಗಳ ರಾಸಾಯನಿಕ ವಸ್ತುಗಳು ಕಾಂತ ಪರಿಣಾಮವನ್ನು ತೋರಿಸುತ್ತವೆ. ಇವುಗಳ ಪರಮಾಣುಗಳಲ್ಲಿ ಒಂಟಿ ಎಲೆಕ್ಟ್ರಾನುಗಳಿರುವುದೇ ಇವೆರಡು ಕ್ರಿಯೆಗಳಿಗೂ ಮೂಲ. ವಸ್ತುವು ರಸಾಯನ ಕ್ರಿಯೆ ನಡೆಯುವ ಮೊದಲು ಮತ್ತು ನಡೆಯುತ್ತಿರುವಾಗ ಹೇಗಿರುತ್ತದೆ ಎಂಬುದನ್ನು ಕಂಡುಹಿಡಿಯಲು ಫಲಕಾರಿಯಾಗಿದೆ (ಕೆಮಿ ಐಸಾರ್ಪ್‍ಷನ್). ಪ್ಲೊರಸೀನ್ ಮತ್ತು ನ್ಯಾಫ್ತಲೀನುಗಳು ಪ್ರತಿಕಾಂತೀಯಗಳು. ಆದರೆ ಇವನ್ನು ಅತಿನೇರಿಳೆ ಕಿರಣಗಳಿಗೆ ಒಡ್ಡಿದಾಗ ಇವು ಅನುಕಾಂತೀಯಗಳಾಗುತ್ತವೆ. ಈ ಗುಣಗಳನ್ನು ವಿವಿಧ ಪರಿಸ್ಥಿತಿಗಳಲ್ಲಿ ಕಂಡುಹಿಡಿದು ಸ್ಫುರದೀಪ್ತಿ. (ಫಾಸ್ಟರಸೆನ್ಸ್) ಹೇಗೆ ಆಗುತ್ತದೆ ಎಂಬುದರ ಸಂಶೋಧನೆಯಲ್ಲಿ ಸಹ ಕಾಂತರಸಾಯನಶಾಸ್ತ್ರವನ್ನು ಉಪಯೋಗಿಸಿಕೊಂಡಿದ್ದಾರೆ. 

(ಎ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ